ಮಂಜು ಮಾಂಡವ್ಯ ನಾಯಕನಾಗಿ ಮೊದಲ ಬಾರಿಗೆ ಎಂಟ್ರಿಕೊಟ್ಟ ಸಿನಿಮಾ ‘ಶ್ರೀ ಭರತ ಬಾಹುಬಲಿ’. ಚಿಕ್ಕಣ್ಣ ಹಾಗೂ ಮಂಜು ಮಾಂಡವ್ಯ ಭರತ-ಬಾಹುಬಲಿಯಾಗಿ ಜನರನ್ನು ಮನರಂಜಿಸಿದ್ದ ಸಿನಿಮಾ. ಅದೆಷ್ಟೋ ಜನ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಲು ಆಗಲಿಲ್ಲ ಎಂಬ ಬೇಸರವನ್ನು ವ್ಯಕ್ತಪಡಿಸುತ್ತಿದ್ರು. ಇದೀಗ ಆ ಬೇಸರವನ್ನ ಹೋಗಲಾಡಿಸುವಂತ ಸಮಯ ಬಂದಿದೆ. ಹೌದು ಅಮೆಜಾನ್ ಪ್ರೈಮ್ ನಲ್ಲಿ ‘ಶ್ರೀ ಭರತ ಬಾಹುಬಲಿ’ ಸಿನಿಮಾ ನೋಡುಗರಿಗೆ ಸಿಕ್ತಾ ಇದೆ.

ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಪ್ರೈಮ್ ನಲ್ಲಿ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಚಿತ್ರಮಂದಿರದಲ್ಲಿ ಇಂತ ಒಳ್ಳೆ ಮನರಂಜನೆಯ ಸಿನಿಮಾ ನೋಡುವುದಕ್ಕೆ ಆಗಲಿಲ್ಲವಲ್ಲ ಎಂಬ ಬೇಸರವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಈ ಕೊರೋನಾ ವೈರಸ್ ನಿಂದಾಗಿ ಎಲ್ಲೆಡೆ ಲಾಕ್ ಡೌನ್ ಮುಂದುವರಿದಿದೆ. ಈಗ ಏನಿದ್ರು ಮನೆಯಲ್ಲಿ ಲಾಕ್ ಆಗಿ ಟೈಮ್ ಪಾಸ್ ಗೆ ಏನಾದ್ರೂ ಮಾಡ್ಬೇಕು ಅಂತ ಹುಡುಕ್ತಾ ಇರ್ತಾರೆ. ಇಷ್ಟು ದಿನ ಮನೆಯಲ್ಲೇ ಲಾಕ್ ಆಗಿ ಬೇಸರವೆನಿಸಿದ ಮನಸ್ಸಿಗೆ ಮುದ ನೀಡಿ, ನಕ್ಕ ನಲಿಸಲು ‘ಶ್ರೀ ಭರತ ಬಾಹುಬಲಿ’ ಸೂಕ್ತವಾದ ಸಿನಿಮಾ. ಮನೆ ಮಂದಿಯೆಲ್ಲಾ ಒಂದೆಡೆ ಕುಳಿತು ನಗು ಬಯಸುವವರಿಗಾಗಿ ‘ಶ್ರೀ ಭರತ ಬಾಹುಬಲಿ’ಯನ್ನು ಪ್ರೈಮ್ ನಲ್ಲಿ ಬಿಡುಗಡೆ ಮಾಡಲಾಗಿದೆ.

‘ಮಾಸ್ಟರ್ ಪೀಸ್’ ಅಂತ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕನ ನಟನೆ ಒಂದು ಕಡೆ, ಹಾಸ್ಯದಲ್ಲಿ ಖ್ಯಾತಿ ಪಡೆದಿರುವ ಚಿಕ್ಕಣ್ಣ ಇನ್ನೊಂದು ಕಡೆ. ಸೀರಿಯಸ್ ಮ್ಯಾಟರ್ ಇಟ್ಟುಕೊಂಡು ಕಾಮಿಡಿ ಕಾನ್ಸೆಪ್ಟ್ ನಲ್ಲಿ ಮನರಂಜನೆ ನೀಡಿದ ಸಿನಿಮಾವಿದು. ಮಂಜು ಮಾಂಡವ್ಯ, ಚಿಕ್ಕಣ್ಣ, ಸಾರಾ ಹರೀಶ್, ಶ್ರೇಯಾ ಶೆಟ್ಟಿ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಮಂಜು ಮಾಂಡವ್ಯ ಹೊಸಬರನ್ನೇ ತೆರೆ ಮೇಲೆ ತಂದಿದ್ದರು, ಅವರ ನಟನೆ ಅದ್ಭುತವಾಗಿ ಮೂಡಿ ಬಂದಿದೆ. ಒಟ್ಟಿನಲ್ಲಿ ಈ ಸಿನಿಮಾ ಕಂಪ್ಲೀಟ್ ಮನರಂಜನೆಯ ಜೊತೆಗೆ ಒಂದೊಳ್ಳೆ ಸಿನಿಮಾ ನೋಡಿದ ಖುಷಿ ನೀಡುವುದರಲ್ಲಿ ಅನುಮಾನವಿಲ್ಲ.