ಮಂಡ್ಯ, ಅಲ್ಲಿನ ಪರಿಸರ, ಅದರ ಸೌಂದರ್ಯ, ಮಾತು, ಜನ, ಬದುಕಿನ ಶೈಲಿ ಎಲ್ಲವೂ ‘ಆನೆಬಲ’ ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ರೂಪುಗೊಂಡಿದೆ. ರಾಗಿಮುದ್ದೆ ಸ್ಪರ್ಧೆ, ಸ್ಪರ್ಧಿಗಳು, ಅದರ ಸುತ್ತ ಒಂದಷ್ಟು ಕ್ಯಾರೆಕ್ಟರುಗಳು, ಇವುಗಳ ಜೊತೆಗೆ ತೆರೆದುಕೊಳ್ಳುವ ‘ಆನೆಬಲ’ ಸಿನಿಮಾ ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿರುವ ಗ್ರಾಮೀಣ ಸೊಗಡಿನ ಕಥೆಗೆ ಜನ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳು ಕೂಡ ಸಿನಿಮಾವನ್ನು ನೋಡಿ ಕೊಂಡಾಡಿದ್ದಾರೆ.

ಸಿನಿಮಾಗಳಿಗೆ ಪ್ರಮೋಷನ್ ತುಂಬಾ ಮುಖ್ಯವಾಗುತ್ತೆ. ಒಂದು ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನ ಅದರ ಜವಾಬ್ದಾರಿ ಚಿತ್ರತಂಡದ ಮೇಲಿರುತ್ತೆ. ನಂತರ ಆ ಸಿನಿಮಾ ರಿಲೀಸ್ ಆಗಿ, ಕಥೆ ಪ್ರೇಕ್ಷಕರಿಗೆ ಇಷ್ಟವಾದ್ರೆ ಪ್ರಮೋಷನ್ ಅಗತ್ಯವೇ ಇರುವುದಿಲ್ಲ. ಯಾಕಂದ್ರೆ ನಮ್ಮ ಕನ್ನಡಿಗರು ಯಾವತ್ತಿಗೂ ಉತ್ತಮವಾದ ಸಿನಿಮಾವನ್ನ ಕೈಬಿಟ್ಟ ಉದಾಹರಣೆಯೇ ಇಲ್ಲ. ಒಬ್ಬ ನೋಡಿದ ಸಿನಿಮಾ ಕಥೆಯನ್ನ ಹತ್ತು ಜನಕ್ಕೆ ಹಂಚಿ ಅವರು ಕೂಡ ಆ ಸಿನಿಮಾವನ್ನು ನೋಡುವಂತೆ ಮಾಡುವುದು ನಮ್ಮ ಕನ್ನಡಿಗರ ಗುಣ. ಇದೀಗ ಅಂತದ್ದೇ ಒಂದು ಸನ್ನಿವೇಶ ಮುಂದುವರೆದಿದೆ. ಅದು ‘ಆನೆಬಲ’ ಸಿನಿಮಾಗೆ. ಹೌದು ವಿದ್ಯಾರ್ಥಿಗಳು ಈ ಸಿನಿಮಾವನ್ನು ನೋಡಿ, ಪ್ರಚಾರ ಕೂಡ ಆರಂಭಿಸಿದ್ದಾರೆ. ಎಲ್ಲಿ ಅಂತೀರಾ..? ಮುಂದೆ ಓದಿ.

ನಾಗಮಂಗಲ ಸೇರಿದಂತೆ ಅನೇಕ ಕಾಲೇಜುಗಳಲ್ಲಿ ಈ ರೀತಿ ವಿದ್ಯಾರ್ಥಿಗಳ ಸಪೋರ್ಟ್ ಸಿನಿಮಾಗೆ ಸಿಕ್ಕಿದೆ. ತಾವೂ ನೋಡಿದ್ದಲ್ಲದೇ, ಸ್ನೇಹಿತರಿಗೂ ಈ ಸಿನಿಮಾ ನೋಡಿ, ಇಲ್ಲಂದ್ರೆ ಒಂದೊಳ್ಳೆ ಕನ್ನಡ ಸಿನಿಮಾವನ್ನು ಮಿಸ್ ಮಾಡಿಕೊಳ್ತೀರಾ ಅಂತ ಸಲಹೆ ನೀಡುತ್ತಿದ್ದಾರೆ. ಈ ಸಿನೆಮಾದಲ್ಲಿರುವ ಹಾಡು ಮತ್ತು ಕಾಮಿಡಿಗೆ ಫಿದಾ ಆಗಿರುವ ವಿದ್ಯಾರ್ಥಿಗಳು ವಾಲಂಟರಿಯಾಗಿ ಸಿನೆಮಾ ಪ್ರಮೋಷನ್ ಮಾಡುತ್ತಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಮತ್ತಷ್ಟು ಹೊಸ ಹುರುಪು ಸಿಕ್ಕಂತಾಗಿದೆ.

ಪದವಿ ತರಗತಿಯ ಪರೀಕ್ಷೆಗಳು ಇನ್ನೂ ಎರಡು ತಿಂಗಳಿರುವ ಕಾರಣ ವಿದ್ಯಾರ್ಥಿಗಳು ‘ಆನೆಬಲ’ ಸಿನೆಮಾ ನೋಡಿ ಮೆಚ್ಚಿಕೊಂಡಿದ್ದಾರೆ. ತಮ್ಮ ಸಹಪಾಠಿಗಳಿಗೆ, ಸಿಕ್ಕವರಿಗೆಲ್ಲ ‘ಆನೆಬಲ’ ಸಿನಿಮಾ ನೋಡಲು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳ ಈ ಪ್ರೀತಿಗೆ ಚಿತ್ರತಂಡ ಕೃತಜ್ಞತೆ ಸಲ್ಲಿಸಿದ್ದು, ಅವರ ಪ್ರೀತಿ ಸಹಕಾರಕ್ಕೆ ಅಪಾರ ಸಂತಸ ವ್ಯಕ್ತಪಡಿಸಿದೆ.