ಇದು ಇಡೀ ಜಗತ್ತಿಗೇ ಕೊರೋನಾ ವೈರಸ್ಸಿನ ಕರಾಳ ಛಾಯೆ ಆವರಿಸಿಕೊಂಡಿದೆ. ನಮ್ಮದೇ ರಾಜ್ಯದಲ್ಲಿಯೂ ಅದರ ರಕ್ಕಸ ಬಾಹುಗಳು ಚಾಚಿಕೊಂಡು ಎಲ್ಲರನ್ನೂ ಬೆದರಿಸಿ ಮನೆಯೊಳಗೆ ಕೂರುವಂತೆ ಮಾಡಿದೆ. ಇಂಥಾ ಸಮಯದಲ್ಲಿ ಸದಾ ರಂಗು ರಂಗಾದ ಸುದ್ದಿಗಳನ್ನು ತೇಲಿ ಬಿಡುತ್ತಿದ್ದ ಚಿತ್ರರಂಗಕ್ಕೂ ಮಂಕು ಕವಿದಿದೆ. ಆದರೆ, ಈ ಲಾಕ್‍ಡೌನ್ ಎಲ್ಲ ಮುಗಿದು ಸಹಜ ಸ್ಥಿತಿ ಮರಳುತ್ತಲೇ ಪ್ರೇಕ್ಷಕರನ್ನೆಲ್ಲ ಮುದಗೊಳಿಸೋ ಭರವಸೆ ಮೂಡಿಸೋ ಒಂದಷ್ಟು ಸಿನಿಮಾಗಳು ಸದರಿ ವಿಷಮ ಸನ್ನಿವೇಷದಲ್ಲಿಯೂ ಟಾಕ್ ಕ್ರಿಯೇಟ್ ಮಾಡುತ್ತಿವೆ. ಕೊರೋನಾ ಕಾಲದಲ್ಲಿಯೇ ಅವಿ ನಿರ್ದೇಶನದ ಕಲಿವೀರ ಚಿತ್ರದ ಕೇಕೆಯೂ ಜೋರಾಗಿಯೇ ಕೇಳಿಸಲಾರಂಭಿಸಿದೆ.

ಕಲಿವೀರ ಎಂಬ ಚಿತ್ರ ಬಹು ಹಿಂದಿನಿಂದಲೇ ಪ್ರೇಕ್ಷಕರ ಆಸಕ್ತಿ ಕೇಂದ್ರಕ್ಕೆ ಲಗ್ಗೆಯಿಟ್ಟಿತ್ತು. ಇದೀಗ ರುದ್ರಿ ಚಿತ್ರದ ಮೂಲಕ ಅಬ್ಬರಿಸುತ್ತಿರೋ ಪಾವನಾ ಗೌಡ, ಚಿರಶ್ರೀ ಅಂಚನ್ ಮತ್ತು ಏಕಲವ್ಯ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ತನ್ನ ಭಿನ್ನ ಪೋಸ್ಟಡಿರ್ ಗಳು ಮತ್ತು ಅದರ ಮೂಲಕವೇ ಹೊಮ್ಮಿಕೊಂಡಿದ್ದ ವಿಶಿಷ್ಟವಾದ ಕಥೆಯ ಸುಳಿವಿನೊಂದಿಗೆ ಪ್ರೇಕ್ಷಕರೆಲ್ಲ ತನ್ನತ್ತ ದೃಷ್ಟಿ ಹಾಯಿಸುವಂತೆಯೂ ಮಾಡಿತ್ತು. ಬಹುಶಃ ಕೊರೋನಾ ಗ್ರಹಣ ಕವುಚಿಕೊಳ್ಳದೇ ಹೋಗಿದ್ದರೆ ಈ ಹೊತ್ತಿಗೆಲ್ಲ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಕಲಿವೀರ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಲು ರೆಡಿಯಾಗುತ್ತಿದ್ದನೇನೋ… ಆದರೆ ಲಾಕ್‍ಡೌನ್‍ನಿಂದ ಒಂದಷ್ಟು ಹಿನ್ನಡೆಯಾದರೂ ಬೇಗನೆ ಬಾಕಿ ಕೆಲಸಗಳನ್ನು ಮುಗಿಸಿಕೊಂಡು ಪ್ರೇಕ್ಷಕರನ್ನು ಮುಖಾಮುಖಿಯಾಗುವ ಉಮೇದು ನಿರ್ದೇಶಕ ಅವಿ ಅವರಲ್ಲಿದೆ.

ಕಲಿವೀರ ಎಂಬ ಹೆಸರಲ್ಲಿಯೇ ಒಂದು ಫೋರ್ಸ್ ಇದೆ. ಅದರ ಪೋಸ್ಟರ್ ಗಳಂತೂ ಇದರಲ್ಲಿ ಹೊಸತೇನೋ ಇದೆಯೆಂಬ ಭಾವವನ್ನು ಯಾರಲ್ಲಿಯಾದರೂ ಪ್ರತಿಷ್ಟಾಪಿಸುವಷ್ಟು ಶಕ್ತವಾಗಿವೆ. ಈ ಹಿಂದೆ ಕನ್ನಡ ದೇಶದೊಳ್ ಎಂಬ ಕನ್ನಡಾಭಿಮಾನವೇ ಎರಕ ಹೊಯ್ದಂಥಾ ಚಿತ್ರವೊಂದನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದರಲ್ಲಾ ಅವಿ? ಆ ಚಿತ್ರ ಹೇಳಿಕೊಳ್ಳುವಂಥ ಗೆಲುವು ಕಾಣದಿದ್ದರೂ ಕೂಡಾ ಓರ್ವ ನಿರ್ದೇಶಕರಾಗಿ ಅವರು ಪ್ರಶಂಸೆ ಪಡೆದುಕೊಂಡಿದ್ದರು. ಭಾರೀ ಪ್ರಚಾರ ಪಡೆದುಕೊಂಡು, ಅದನ್ನು ಸರಿಗಟ್ಟುವಂತೆಯೇ ತಯಾರಾಗಿದ್ದ ಆ ಸಿನಿಮಾ ಪ್ರಭಾವಳಿಯಲ್ಲಿಯೇ ಇದೀಗ ಕಲಿವೀರ ಚಿತ್ರವೂ ಕಳೆಗಟ್ಟಿಕೊಳ್ಳಲಾರಂಭಿಸಿದೆ. ನಿರ್ದೇಶಕ ಅವಿ ಹೇಳುವ ಪ್ರಕಾರವೇ ನೋಡ ಹೋದರೂ ಈ ಸಿನಿಮಾ ಹೊಸ ಆವೇಗ ಹುಟ್ಟು ಹಾಕೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

ಒಂದು ಬುಡಕಟ್ಟು ಜನಾಂಗದ ಕಥೆಯ ಬೇಸಿನಲ್ಲಿ ಹಲವಾರು ಕೊಂಬೆ ಕೋವೆಗಳಿರೋ ಸಮೃದ್ಧವಾದ ಕಥೆಯನ್ನಿಲ್ಲಿ ದೃಷ್ಯೀಕರಿಸಲಾಗಿದೆಯಂತೆ. ಇಲ್ಲಿ ಕಲಿ ಅನ್ನೋದು ಕಥಾ ನಾಯಕನ ಹೆಸರು. ಆತ ಹೇಗೆ ವೀರನಾಗಿ ಅಬ್ಬರಿಸುತ್ತಾನೆಂಬುದು ಕಥೆಯ ಕೇಂದ್ರಬಿಂದು. ಆ ಬುಡಕಟ್ಟು ಜನಾಂಗಕ್ಕೊಂದು ಸಂಕಷ್ಟ ಎದುರಾಗುತ್ತೆ. ಅದರ ವಿರುದ್ಧ ಕಲಿ ಹೇಗೆ ವೀರನಂತೆ ಹೋರಾಡುತ್ತಾನೆಂಬುದು ಒಂದೆಳೆ ಕಥಾ ಸಾರಾಂಶ. ಆದರೆ, ಇದರಾಚೆಗೂ ಅಚ್ಚರಿಗಳ ಸಂತೆ ಚಿತ್ರದುದ್ದಕ್ಕೂ ನೆರೆದಿದೆಯಂತೆ. ಆ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟುಕೊಡದ ಅವಿ ಎಲ್ಲ ನಿಗೂಢಗಳನ್ನೂ ಮುಚ್ಚಟೆಯಾಗಿ ಕಾಪಾಡಿಕೊಳ್ಳುತ್ತಾರೆ. ಆದರೆ, ಈ ಹಿಂದಿನ ಕೆಲ ಕೊರತೆಗಳನ್ನು ನೀಗಿಕೊಂಡು ಮನೋರಂಜನೆಯನ್ನೇ ಮೂಲವಾಗಿಟ್ಟುಕೊಂಡು ಪ್ರೀತಿ, ಆಕ್ಷನ್ ಸೇರಿದಂತೆ ಎಲ್ಲವನ್ನೂ ಒಳಗೊಂಡು ಕಲಿವೀರನನ್ನವರು ರೂಪಿಸಿರೋದಂತೂ ಸತ್ಯ.

ಈ ಶೀರ್ಷಿಕೆಯ ಖದರ್ ಗೆ ತಕ್ಕುದಾದ ಸಾಹಸವೇ ಪ್ರಧಾನ ಅಂಶ. ಇಲ್ಲಿನ ಸಾಹಸ ಸನ್ನಿವೇಷಗಳನ್ನು ಡಿಫರೆಂಟ್ ಡ್ಯಾನಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಸೂರಿ ಅವರ ದುನಿಯಾವನ್ನು ಹೊರತಾಗಿಸಿ ಮತ್ತೆಂದೂ ಕಾಣಿಸಿಕೊಳ್ಳದಂಥಾ ಸಾಹಸ ಸನ್ನಿವೇಷಗಳು ಇಲ್ಲಿವೆಯಂತೆ. ರಂಗಭೂಮಿ ಹಿನ್ನೆಲೆಯ ಏಕಲವ್ಯ ಕಲಿವೀರನಾಗಿ ಈ ಪಾತ್ರವನ್ನು ಅದ್ಭುತವಾಗಿಯೇ ಆವಾಹಿಸಿಕೊಂಡಿದ್ದಾರಂತೆ. ಇತ್ತೀಚಿನ ದಿನಗಳಲ್ಲಿಯಂತೂ ಕಮರ್ಶಿಯಲ್ ಜಾಡಿನಲ್ಲಿಯೇ ಚಕಿತಗೊಳಿಸುವಂಥಾ ಪ್ರಯೋಗಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆಯುತ್ತಿವೆ. ಅವಿ ಕಲಿವೀರ ಚಿತ್ರದಲ್ಲಿಯೂ ಕೂಡಾ ಅಂಥಾದ್ದೇ ಪಟ್ಟನ್ನು ಪ್ರದರ್ಶಿಸಿದ್ದಾರೆ. ಈ ಹಿಂದೆ ಕನ್ನಡ ದೇಶದೊಳ್ ಚಿತ್ರದ ಸಂದರ್ಭದಲ್ಲೆದುರಾದ ಎಲ್ಲ ಸಂಕಷ್ಟಗಳನ್ನೂ ಪಾಠವಾಗಿ ಪರಿಗಣಿಸಿ ಈ ಬಾರಿ ಎಲ್ಲ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವಂಥಾ ಸಿನಿಮಾವನ್ನೇ ಸಿದ್ಧಪಡಿಸಿದ್ದಾರಂತೆ.

ಯಾವತ್ತೂ ಒಂದಷ್ಟು ಭ್ರಮನಿರಸನವಾಗದೆ, ನೋವು ನಿರಾಸೆಗಳ ತರಚುಗಾಯಗಳಾಗದೆ ಗೆಲುವೆಂಬುದು ದಕ್ಕಲು ಸಾಧ್ಯವಿಲ್ಲ. ಸಿನಿಮಾವನ್ನೇ ಧ್ಯಾನವಾಗಿಸಿಕೊಂಡು ಬೆಳೆದು ಬಂದ ಅವಿ ಕೂಡಾ ಆದ ಆಘಾತಗಳನ್ನೆಲ್ಲ ಸಕಾರಾತ್ಮಕವಾಗಿಯೇ ಪರಿಗಣಿಸುತ್ತಾ ಸಾಗಿ ಬಂದಿದ್ದಾರೆ. ಕನ್ನಡ ದೇಶದೊಳ್ ಎಂಬ ಸಿನಿಮಾ ಮಾಡಿ ಅದನ್ನು ಅದ್ಭುತವಾಗಿಯೇ ರೀಚ್ ಮಾಡಿಸಿದ್ದವರು ಅವಿ. ಆದರೆ ಅದರ ಬಿಡುಗಡೆಯಾದ ನಂತರದಲ್ಲಿ ವಿತರಣೆಯೂ ಸೇರಿದಂತೆ ನಾನಾ ಬಗೆಯಲ್ಲಿ ಸಂಕಷ್ಟಗಳ ಅವರನ್ನು ಸುತ್ತುವರೆದು ಕಾಡಿದ್ದವು. ಸಿನಿಮಾ ರೂಪಿಸುವ ದೃಷ್ಟಿಯಲ್ಲಿಯೂ ಹಲವಾರು ಬದಲಾವಣೆ ಮಾಡಿಕೊಳ್ಳಬೇಕೆಂಬ ವಾಸ್ತವ ದರ್ಶನವೂ ಅವರಿಗಾಗಿತ್ತು. ಅದೆಲ್ಲವನ್ನು ಸಮಚಿತ್ತದಿಂದ ಎದುರುಗೊಂಡ ಅವಿ ಕಡೆಗೂ ಕಲಿವೀರ ಎಂಬ ಖದರಿನ ಕಥೆಯನ್ನು ದೃಷ್ಯೀಕರಿಸಿದ್ದಾರೆ.

ಹೀಗೆ ಹಲವಾರು ಏಳು ಬೀಳುಗಳಾಚೆಗೂ ಕಲಿವೀರ ಚಿತ್ರವನ್ನು ರೂಪಿಸಿರುವ ಅವಿ ಮಧುಗಿರಿ ಮೂಲದವರು. ಆದರೆ ಓದಿದ್ದು ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿಯೇ. ಮೈಕ್ರೋ ಬಯಾಲಜಿ ಬಿಎಸ್‍ಸಿ ಪದವಿ ಪಡೆದಿದ್ದರೂ ಕೂಡಾ ಅದಾಗಲೇ ಅವರೊಳಗೆ ಸಿನಿಮಾ ಗುಂಗು ಗಿರಕಿ ಹೊಡೆಯಲಾರಂಭಿಸಿತ್ತು. ಹಾಗೆ ಅವರಿಗೆ ಸಿನಿಮಾ ಹುಚ್ಚು ಹತ್ತಿಸಿಕೊಂಡಿದ್ದರ ಹಿಂದೆಯೂ ಇಂಟರೆಸ್ಟಿಂಗ್ ಕಥೆಯಿದೆ. ಅವಿ ಪಿಯುಸಿ ಕಲಿಯುವ ಹೊತ್ತಿನವರೆಗು ಅಷ್ಟಾಗಿ ಸಿನಿಮಾ ಗೀಳು ಹೊಂದಿದ್ದವರಲ್ಲ. ಆಗೀಗ ಕೆಲ ಸಿನಿಮಾ ನೋಡಿದರೆ ಅದೇ ಹೆಚ್ಚು ಎಂಬಂತಿತ್ತು. ಅಂಥಾ ಅವರನ್ನು ಸಿನಿಮಾದತ್ತ ವ್ಯಾಮೋಹಗೊಳ್ಳುವಂತೆ ಮಾಡಿದ್ದು ಅವರ ಸ್ನೇಹಿತರನೇಕರಿಗಿದ್ದ ರಿಯಲ್ ಸ್ಟಾರ್ ಉಪೇಂದ್ರ ಕ್ರೇಜ್. ಅದು ಉಪ್ಪಿ ಉತ್ತುಂಗದಲ್ಲಿದ್ದ ಕಾಲ. ಸಿನಿಮಾ ಗ್ರಾಮರ್ ಅನ್ನೇ ಬದಲಾಯಿಸಿದ ಉಪ್ಪಿ ಮೆಲ್ಲಗೆ ಅವಿ ಅವರ ಆಸಕ್ತಿ ಸೆಳೆಯಲಾರಂಭಿಸಿದ್ದರು. ತಾನೂ ಕೂಡಾ ಇಂಥಾ ಹೊಸಾ ಸೃಷ್ಟಿಯೊಂದಿಗೆ ನಿರ್ದೇಶಕನಾಗಿ ನೆಲೆ ಕಂಡುಕೊಳ್ಳಬೇಕೆಂಬ ಇರಾದೆಯಿಂದಲೇ ಅವರು ಗಾಂಧಿನಗರದಲ್ಲಿ ಅಲೆಯಲು ಶುರುವಿಟ್ಟುಕೊಂಡಿದ್ದರು.

ಹಾಗೆ ದಿಕ್ಕಿಲ್ಲದೆ ಸಿನಿಮಾ ಕನಸನ್ನು ಮಾತ್ರವೇ ಕಸುವಾಗಿಸಿಕೊಂಡು ಗಾಂಧಿನಗರಕ್ಕೆ ಬಂದವರು ಅನುಭವಿಸಬಹುದಾದ ಎಲ್ಲ ಸಂಕಷ್ಟಗಳನ್ನೂ ಕೂಡಾ ಅವಿ ಕಂಡುಂಡರು. ಆದರೂ ಹೇಗೋ ಚಿತ್ರರಂಗಕ್ಕೆ ಪ್ರವೇಶ ಪಡೆದು ದಶಕಗಳಿಂದಲೂ ನಾನಾ ಸ್ವರೂಪದಲ್ಲಿ ಚಾಲ್ತಿಯಲ್ಲಿದ್ದಾರೆ. ಮೊದಲಿಗೆ ನೂರಾರು ಕನಸು ಎಂಬ ಮಕ್ಕಳ ಚಿತ್ರ ನಿರ್ದೇಶನ ಮಾಡಿದ್ದ ಅವಿ ಆ ನಂತರದಲ್ಲಿ ಡಾಕ್ಯುಮೆಂಟರಿಯತ್ತ ವಾಲಿಕೊಂಡಿದ್ದರು. ಈ ನಡುವೆಯೇ ಅನ್ನದಾತನಿಗೆ ಶರಣು ಎಂಬ ಹಾಡಿನ ಮೂಲಕವೂ ಗಮನ ಸೆಳೆದಿದ್ದರು. ಬಳಿಕ ಫೇಸ್‍ಬುಕ್‍ನಲ್ಲಿ ಸೀರಿಯಲ್ ಮಾಡೋ ಮೂಲಕ ಹೊಸತನಕ್ಕೆ ನಾಂದಿಯನ್ನೂ ಹಾಡಿದ್ದರು. ಹಾಗೆ ಸಾಗಿ ಬಂದು ಕನ್ನಡ ದೇಶದೊಳ್ ಚಿತ್ರ ನಿರ್ದೇಶನ ಮಾಡಿದ್ದ ಅವಿ ಪಾಲಿಗೆ ಕಲಿವೀರ ಎರಡನೇ ಕನಸು.

ಈ ಚಿತ್ರ ತನ್ನ ವೃತ್ತಿ ಬದುಕಿನ ದಿಕ್ಕು ದೆಸೆಗಳನ್ನು ಬದಲಾಯಿಸುತ್ತದೆ ಎಂಬ ಗಾಢ ನಂಬಿಕೆ ಅವಿಗಿದೆ. ಕಲಿವೀರ ಈವರೆಗೆ ಸೃಷ್ಟಿಸುತ್ತಾ ಬಂದಿರೋ ಕ್ರೇಜ್ ನೋಡಿದರೆ ಅದು ಸಾಕಾರಗೊಳ್ಳುವ ಲಕ್ಷಣಗಳೂ ಢಾಳಾಗಿಯೇ ಕಾಣಿಸುತ್ತಿವೆ. ಇದರಲ್ಲಿ ಎಲ್ಲವೂ ಡಿಫರೆಂಟಾಗಿರಬೇಕೆಂಬ ಇರಾದೆ ಹೊಂದಿದ್ದ ಅವಿ ವಿ ಮನೋಹರ್ ಅವರಿಂದಲೇ ಸಂಗೀತ ಸಂಯೋಜನೆ ಮಾಡಿಸಿದ್ದಾರೆ. ಹೆಚ್ಚೂಕಮ್ಮಿ ಹತ್ತು ವರ್ಷಗಳ ನಂತರ ಮತ್ತೆ ಕಲಿವೀರನ ಮೂಲಕ ಮನೋಹರ್ ಸಂಗೀತ ಪರ್ವ ಮತ್ತೆ ಆರಂಭವಾಗುತ್ತದೆಂಬ ನಂಬಿಕೆಯೂ ಅವಿಯವರಲ್ಲಿದೆ. ಖುದ್ದು ಮನೋಹರ್ ಅವರೇ ಈ ಸಿನಿಮಾ ಬಗ್ಗೆ ಅಗಾಧ ಭರವಸೆಯಿಟ್ಟುಕೊಂಡಿದ್ದಾರೆ. ಲಾಕ್‍ಡೌನ್ ಮುಗಿದಾಕ್ಷಣವೇ ಬಾಕಿ ಇರುವ ಕೆಲಸ ಮುಗಿಸಿಕೊಂಡು ಕಲಿವೀರ ಸಿನಿಮಾ ಮಂದಿರಗಳಲ್ಲಿ ಅಬ್ಬರಿಸಲು ಮುಹೂರ್ತ ನಿಗಧಿಯಾಗಲಿದೆ.