ರಮೇಶ್ ಅರವಿಂದ್ ನಟಿಸಿರುವ ‘ಶಿವಾಜಿ ಸುರತ್ಕಲ್’ ಚಿತ್ರ ಟೀಸರ್ ಹಾಗೂ ಟ್ರೈಲರ್ ನಿಂದ ಭಾರೀ ನಿರೀಕ್ಷೆ ಹಾಗೂ ಕುತೂಹಲ ಹುಟ್ಟಿಸಿದೆ. ಇದೊಂದು ಪತ್ತೇದಾರಿ ಸಿನಿಮಾವಾಗಿದ್ದು, ರಣಗಿರಿಯಲ್ಲಿ ನಡೆಯೋ ಅನುಮಾನಾಸ್ಪದ ಸಾವಿನ ಸುತ್ತ ಈ ಕತೆಯನ್ನು ಹೆಣೆಯಲಾಗಿದೆ. ಈ ಕೊಲೆಯ ರಹಸ್ಯ ಭೇಧಿಸುವ ಡಿಟೆಕ್ಟಿವ್ ಪಾತ್ರದಲ್ಲಿ ರಮೇಶ್ ಅರವಿಂದ್ ಬಣ್ಣಹಚ್ಚಿದ್ದಾರೆ.

ಸಸ್ಪೆನ್ಸ್, ಹಾರಾರ್, ಥ್ರಿಲ್ಲಿಂಗ್ ಎಲಿಮೆಂಟ್‍ಗಳು ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ಮಿಶ್ರಣವಾಗಿದ್ದು, ನೋಡುಗರಿಗೆ ಥ್ರಿಲ್ ಕೊಡಲಿದೆ. ರಮೇಶ್ ಅರವಿಂದ್ ಮೊದಲ ಬಾರಿ ಪತ್ತೇದಾರಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರ ಮಹಾ ಶಿವರಾತ್ರಿಗೆ ಬಿಡುಗಡೆಗೆ ಸಿದ್ದವಾಗಿದೆ. ರಾಧಿಕಾ ನಾರಾಯಣ್, ಆರೋಹಿ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಅವಿನಾಶ್, ರಮೇಶ್ ಪಂಡಿತ್, ರೋಹಿತ್ ಭಾನುಪ್ರಕಾಶ್, ರಾಘು ರಮಣಕೊಪ್ಪ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಗುರುಪ್ರಸಾಧ್ ಎಂ.ಜಿ ಕ್ಯಾಮೆರಾ ವರ್ಕ್ ‘ಶಿವಾಜಿ ಸುರತ್ಕಲ್’ ಚಿತ್ರಕ್ಕಿದೆ. ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗಿದ್ದು, ರೇಖಾ.ಕೆ.ಎನ್, ಅನೂಪ್ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟಿಹಾಕಿರುವ ಈ ಚಿತ್ರ ಫೆಬ್ರವರಿ 21ಕ್ಕೆ ತೆರೆಗೆ ಬರಲಿದೆ.