ಕಿರುತೆರೆಯಲ್ಲಿ ಈಗಾಗಲೇ ಹೆಸರು ಮಾಡಿರುವ ಸುಬ್ರಮಣ್ಯ ಪ್ರಸಾದ್ ನಿರ್ದೇಶನದ ಸಿನಿಮಾ ‘ಕೊಡೆ ಮುರುಗ’. ಈಗಾಗಲೇ ಪೋಸ್ಟರ್, ಟ್ರೇಲರ್, ಹಾಡಿನಿಂದ ಸಾಕಷ್ಟು ಸದ್ದು ಮಾಡಿದ್ದ ಸಿನಿಮಾ ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ‘ಮುರುಗ ನಾನು ಮುರುಗಿ ನೀನು’ ಎಂಬ ಹಾಡಿಗೆ ಜೋಡಿಹಕ್ಕಿ, ಸೇವಂತಿ ಖ್ಯಾತಿ ಪಲ್ಲವಿ ಕುಣಿದಿದ್ದಾರೆ. ಜೊತೆಗೆ ಮುರುಗ, ಸುಬ್ರಮಣಿ ಸೇರಿದಂತೆ ಅನೇಕರು ಹಾಡಿ ಹೆಜ್ಜೆ ಹಾಕಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಈ ಹಾಡು ರಿಲೀಸ್ ಆಗಿದ್ದು, ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ. ಯೋಗರಾಜ್ ಭಟ್ ಬರೆದಿರುವ ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಹಾಗೂ ಶಾಶ್ವತಿ ಹಾಡಿದ್ದಾರೆ.

ಈ ಸಿನಿಮಾದಲ್ಲಿ ವಿಲನ್ ನನ್ನೇ ಒಂದು ರೀತಿಯಲ್ಲಿ ಹೀರೋ ಆಗಿ ಮಾಡಲು ಹೊರಟಿರುತ್ತಾರೆ. ಖಳನಾಯಕನ ಹೆಸರನ್ನೇ ಟೈಟಲ್ ಇಟ್ಟಿರುವುದು ಇದಕ್ಕೆ ಇಂಬು ನೀಡಿದೆ. ಹೀರೋ ಆಗಬೇಕು ಎಂದು ಕನಸು ಕಾಣುವ ಮುರುಗನ ನಾನಾ ಅವತಾರಗಳು ಈ ಹಾಡಿನಲ್ಲಿ ವ್ಯಕ್ತವಾಗುತ್ತಿವೆ. ಅವನ ಸುತ್ತಲಿನವರು ಬೈದರು ನಗುತ್ತಾ, ವಿನಮ್ರದಿಂದ ಬೈದಾಗ ಹೀರೋ ಗುಂಗಲ್ಲಿರುವ ಮುರುಗನಿಗೆ ಅರ್ಥವೇ ಆಗುವುದಿಲ್ಲ. ಇಡೀ ಹಾಡಲ್ಲಿ ಮನರಂಜನೆ ಇರುವುದು ಎದ್ದು ಕಾಣುತ್ತಿದೆ. ಸಿನಿಮಾದಲ್ಲೂ ಕೂಡ ಹಾಸ್ಯ ತುಂಬಿರುವುದು ಈಗಾಗಲೇ ಟ್ರೇಲರ್ ನಿಂದ ಗೊತ್ತಾಗಿತ್ತು. ಇದೀಗ ಹಾಸ್ಯಮಯ ಹಾಡೊಂದು ರಿಲೀಸ್ ಆಗಿದ್ದು, ಮುರುಗ ನಾನು ಮುರುಗಿ ನೀನು ಎಂಬ ಹಾಡಿಗೆ ಜನ ತಮ್ಮದೇ ವಾಕ್ಯ ಸೇರಿಸಿ ಹಾಡಲು ಶುರು ಮಾಡಿದ್ದಾರೆ. ಅಷ್ಟು ಸಖತ್ತಾಗಿದೆ ‘ಕೊಡೆ ಮುರುಗ’ ಸಿನಿಮಾದ ಈ ಹಾಡು.

ಈ ಹಿಂದೆ ಮಮ್ಮಿ ಎಂಬ ಸೂಪರ್ ಸಿನಿಮಾ ನೀಡಿದ್ದ ಕೆ.ಆರ್.ಕೆ ಬ್ಯಾನರ್ ನಲ್ಲಿ ಕೆ ರವಿಕುಮಾರ್ ಅವರೇ ‘ಕೊಡೆ ಮುರುಗ’ ಸಿನಿಮಾವನ್ನು ನಿರ್ಮಿಸಿದ್ದಾರೆ. ರವಿಕುಮಾರ್ ಗೆ ಅಶೋಕ್ ಶಿರಾಲಿ ಸಾಥ್ ನೀಡಿದ್ದಾರೆ. ಸುಬ್ರಮಣ್ಯ ಪ್ರಸಾದ್ ನಾಯಕರಾಗಿದ್ದು, ಕಥೆ ಬರೆದು ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಮುರುಗ ಮತ್ತೊಬ್ಬ ನಟನಾಗಿ ಸಿನಿಮಾದಲ್ಲಿ ಮಿಂಚಿದ್ದಾರೆ. ಉಳಿದಂತೆ ಪಲ್ಲವಿ ಗೌಡ, ಸ್ವಾತಿ ಗುರುದತ್, ತುಮಕೂರು ಮೋಹನ್, ರಂಗಿತರಂಗ ಅರವಿಂದ್, ಕುರಿ ಪ್ರತಾಪ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮಾರ್ಚ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.