– ನವರಸ ನಾಯಕನಿಗೆ ಶುಭಕೋರಿದ ಚಿತ್ರತಂಡ

ಬೆಂಗಳೂರು: ಕನ್ನಡ ಚಿತ್ರರಂಗದ ನವರಸ ನಾಯಕ, ನಗಿಸುತ್ತಲೇ ರಂಜಿಸಿ ಕನ್ನಡ ಸಿನಿರಸಿಕರ ಮನಗೆದ್ದು, ಜನಮನದಲ್ಲಿ ನೆಲೆಸಿರುವ ಜಗೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನವರಸ ನಾಯಕ ಜಗ್ಗೇಶ್ ಹುಟ್ಟುಹಬ್ಬಕ್ಕೆ ತೋತಾಪುರಿ ಚಿತ್ರತಂಡ ಶುಭ ಕೋರಿದೆ. ‘ತೋತಾಪುರಿ’ ಚಿತ್ರದಲ್ಲಿ ಜಗ್ಗೇಶ್ ಈ ಹಿಂದೆ ಮಾಡದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿರಸಿಕರಿಗೆ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಲು ಸಿದ್ಧರಾಗಿದ್ದಾರೆ.

ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ತೋತಾಪುರಿ ಚಿತ್ರದಲ್ಲಿ ಅಧಿತಿ ಪ್ರಭುದೇವ ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಬಿಡುಗಡೆಗೂ ಮುನ್ನವೇ ‘ತೋತಾಪುರಿ’ ಚಿತ್ರ ನೂತನ ದಾಖಲೆಯನ್ನು ಸೃಷ್ಟಿಸಿದೆ. ಸಾಮಾನ್ಯವಾಗಿ ಮೊದಲ ಭಾಗ ಬಿಡುಗಡೆಯಾದ ಮೇಲೆ ಎರಡನೇ ಭಾಗದ ಚಿತ್ರೀಕರಣ ಮಾಡಲಾಗುತ್ತದೆ. ಆದರೆ ‘ತೋತಾಪುರಿ’ ಚಿತ್ರ ಸಿನಿಮಾ ಬಿಡುಗಡೆಗೂ ಮುನ್ನವೇ ಎರಡೂ ಭಾಗದ ಚಿತ್ರೀಕರಣ ಮಾಡುತ್ತಿದ್ದು, ಇದು ಭಾರತೀಯ ಚಿತ್ರರಂಗದಲ್ಲಿ ಮೊದಲು.

ಏಕಕಾಲದಲ್ಲಿ ತೋತಾಪುರಿ ಚಿತ್ರದ ಚಾಪ್ಟರ್-1 ಹಾಗೂ ಚಾಪ್ಟರ್-2 ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ‘ತೋತಾಪುರಿ’ ಚಾಪ್ಟರ್-1 ಭಾಗದ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಚಾಪ್ಟರ್-2 ಚಿತ್ರೀಕರಣವನ್ನು ಭರದಿಂದ ನಡೆಸುತ್ತಿದೆ. ಈ ಮೂಲಕ ಬಿಡುಗಡೆಗೂ ಮುನ್ನವೇ ತೋತಾಪುರಿ ಚಿತ್ರ ಹೊಸ ದಾಖಲೆ ಬರೆದಿದೆ. ಡಾಲಿ ಧನಂಜಯ್, ಸುಮನ್ ರಂಗನಾಥ್, ವೀಣಾ ಸೇರಿದಂತೆ ಸ್ಟಾರ್ ಕಲಾವಿದರ ದಂಡು ‘ತೋತಾಪುರಿ’ ಚಿತ್ರದಲ್ಲಿದ್ದು, ಶಿವಲಿಂಗ ಖ್ಯಾತಿಯ ನಿರ್ಮಾಪಕ ಸುರೇಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.