ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟ ಭರವಸೆಯ ನಟ ಧನ್ವೀರ್. ಮೊದಲ ಸಿನಿಮಾದಲ್ಲೇ ಮಾಸ್ ಪ್ರೇಕ್ಷಕರ ಮನ ಗೆದ್ದ ಧನ್ವೀರ್ ಈಗ ಎರಡನೇ ಚಿತ್ರ ‘ಬಂಪರ್’ಗೆ ಸಿದ್ಧರಾಗುತ್ತಿದ್ದಾರೆ. ಹರಿ ಸಂತೋಷ್ ನಿರ್ದೇಶನದ ಬಂಪರ್ ಚಿತ್ರದಲ್ಲಿ ಧನ್ವೀರ್ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಇದೀಗ ಬಂಪರ್ ಚಿತ್ರತಂಡದಿಂದ ‘ಬಂಪರ್’ ಸುದ್ದಿಯೊಂದು ಹೊರ ಬಿದ್ದಿದೆ. ಕೆಜಿಎಫ್ ಚಿತ್ರದಲ್ಲಿ ಗರುಡನಾಗಿ ಮಿಂಚಿದ್ದ ರಾಮ್ ಬಂಪರ್ ಚಿತ್ರದಲ್ಲಿ ವಿಲನ್ ಆಗಿ ಧನ್ವೀರ್ ಎದುರು ಸೆಣಸಾಡೋದು ಕನ್ಫರ್ಮ್ ಆಗಿದೆ.

ಹೌದು, ಕೆಜಿಎಫ್ ಚಿತ್ರದಲ್ಲಿ ಗರುಡ ಪಾತ್ರದಲ್ಲಿ ಖಡಕ್ ವಿಲನ್ ಆಗಿ ಬಣ್ಣ ಹಚ್ಚಿದ್ದ ರಾಮ್ ಸಖತ್ ಫೇಮಸ್ ಆಗಿದ್ರು. ಮೊದಲ ಚಿತ್ರದಲ್ಲೇ ರಾಮ್ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡು ಜನಪ್ರಿಯತೆ ಗಳಿಸಿಕೊಂಡ್ರು. ಟಾಲಿವುಡ್, ಕಾಲಿವುಡ್ ಅಂಗಳದಿಂದಲೂ ರಾಮ್‍ಗೆ ವಿಲನ್ ಆಗಿ ನಟಿಸಲು ಆಫರ್ ಬರತೊಡಗಿತ್ತು. ಇದೀಗ ಹರಿ ಸಂತೋಷ್ ನಿರ್ದೇಶನದ ಬಂಪರ್ ಚಿತ್ರಕ್ಕೆ ರಾಮ್ ವಿಲನ್ ಆಗಿ ಆಯ್ಕೆ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

‘ಬಂಪರ್’ ಚಿತ್ರ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಭರಾಟೆ ಖ್ಯಾತಿಯ ನಿರ್ಮಾಪಕ ಸುಪ್ರಿತ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಚಿತ್ರವಾಗಿರೋ ಬಂಪರ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ.