ನಟ ಕಿಚ್ಚ ಸುದೀಪ್ ಅವರು ಅಗಲಿದ ತಮ್ಮ ಸಹೋದರನಿಗೆ ಸೋಶಿಯಲ್ ಮೀಡಿಯಾದ ಮೂಲಕ ಸಂತಾಪ ಸೂಚಿಸಿದ್ದಾರೆ.

ನಂದೀಶ್ ಮೃತ ವ್ಯಕ್ತಿ. ಇವರು ಸುದೀಪ್ ಅವರ ಅಪ್ಪಟ ಅಭಿಮಾನಿ ಜೊತೆಗೆ ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆದರೆ ನಂದೀಶ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ಸುದೀಪ್ ಟ್ವೀಟ್ ಮಾಡುವ ಮೂಲಕ ಸಹೋದರ ನಂದೀಶ್ ಅಗಲಿಗೆ ಸಂತಾಪ ಸೂಚಿಸಿದ್ದಾರೆ.

“ನನ್ನ ಆತ್ಮೀಯ ಪ್ರೀತಿಯ ಸಹೋದರ ನಂದೀಶ್ ವಿಧಿವಶರಾಗಿದ್ದಾರೆ. ಅನೇಕ ವರ್ಷಗಳಿಂದ ನಮ್ಮೊಂದಿಗಿದ್ದರು. ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀವಿ ಸಹೋದರ. ನಿಜವಾಗಿಯೂ ಇದು ಭರಿಸಲಾಗದ ನಷ್ಟ. ಅವರ ಕುಟುಂಬದವರಿಗೆ ನಾನು ಸಂತಾಪ ಸೂಚಿಸುತ್ತೇನೆ” ಎಂದು ನಂದೀಶ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಅವರ ಫೋಟೋವನ್ನು ಶೇರ್ ಮಾಡಿದ್ದಾರೆ.

ಸೋಮವಾರ ರಾತ್ರಿ ನಂದೀಶ್ ಬೈಕಿನಲ್ಲಿ ಹೋಗುತ್ತಿದ್ದರು. ಆದರೆ ನಾಗರಬಾವಿಯಲ್ಲಿ ಅಪಘಾತವಾಗಿ ಬೈಕಿನಿಂದ ಕೆಳಗೆ ಬಿದ್ದಿದ್ದಾರೆ. ಹೆಲ್ಮೆಟ್ ಹಾಕದೇ ಇದ್ದುದ್ದರಿಂದ ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಮೃತ ನಂದೀಶ್ ಸ್ನೇಹಿತ ತಿಳಿಸಿದರು.