ಶಿವರಾಜ್‍ಕುಮಾರ್ ಸ್ಟಾರ್ ನಟರಾದರೂ ತಮ್ಮ ಸರಳ ನಡವಳಿಕೆಯಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇದೀಗ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸ್ವತಃ ತಾವೇ ಊಟ ಬಡಿಸುವ ಮೂಲಕ ಅಯ್ಯಪ್ಪ ಸ್ವಾಮಿಯ ಭಕ್ತಿ ಮೆರೆದಿದ್ದಾರೆ.

ಶಿವಣ್ಣ ಪ್ರತಿ ವರ್ಷ ಅಯ್ಯಪ್ಪ ಮಾಲೆ ಧರಿಸಿ, ಶಬರಿಮಲೆಗೆ ಹೋಗಿ ಸ್ವಾಮಿ ಅಯ್ಯಪ್ಪನ ದರ್ಶನ್ ಮಾಡುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ವೈಯಕ್ತಿಕ ಕಾರಣಗಳಿಂದ ಅವರು ಶಬರಿಮಲೆಗೆ ಹೋಗುತ್ತಿಲ್ಲ. ಆದರೆ ಶಿವಣ್ಣ ಶಬರಿಮಲೆಗೆ ಹೋಗದಿದ್ದರೂ ಪ್ರತಿವರ್ಷ ಅಪ್ಪಯ್ಯ ಭಕ್ತರ ಸೇವೆಯನ್ನು ಮಾಡುತ್ತಿದ್ದಾರೆ.

ಶಿವಣ್ಣ ಪ್ರತಿವರ್ಷ ಅಯ್ಯಪ್ಪ ಮಾಲೆ ಧರಿಸಿದ ಭಕ್ತರಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಬುಧವಾರ ಅಯ್ಯಪ್ಪ ಭಕ್ತರಿಗಾಗಿ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಅಲ್ಲಿ ಭಕ್ತರಿಗೆ ತಾವೇ ಊಟವನ್ನು ಬಡಿಸಿದ್ದಾರೆ. ಜೊತೆಗೆ ಭಕ್ತರಿಗೆ ದೇವರ ಅನುಗ್ರಹ ಸಿಗಲಿ ಎಂದು ಹಾರೈಸಿದ್ದಾರೆ.

ಅಭಿಮಾನಿಗಳು ಶಿವಣ್ಣ ಊಟ ಬಡಿಸುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಶಿವಣ್ಣ ತಮ್ಮ ಪತ್ನಿ ಗೀತಾ ಅವರ ಜೊತೆ ತಿರುಮಲ ತಿರುಪತಿ ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬಂದಿದ್ದರು.